ಕಾಡು ಗುಬ್ಬಚ್ಚಿ

ಫ್ರಿಂಜಿಲ್ಲಿಡೀ ಕುಲದ ಜಿಮ್ನೋರಿಸ್ ಜಾತಿಯ ಒಂದು ಪಕ್ಷಿ (ಜಿಮ್ನೋರಿಸ್ ಗ್ಸ್ಯಾಂತಸ್ ಗ್ಸ್ಯಾಂತಸ್). ಸಾಮಾನ್ಯವಾಗಿ ಈ ಗುಬ್ಬಚ್ಚಿ ಮೈದಾನ ಪ್ರದೇಶಗಳಲ್ಲಿ ವಾಸಮಾಡುತ್ತದೆ. ಸುಮಾರು 4,500' ಎತ್ತರ ಇರುವ ಬೆಟ್ಟಗಳಿಗೂ ಹೋಗುವುದುಂಟು. ಗುಂಡುಗುಬ್ಬಚ್ಚಿಯ ಉದ್ದ ಸುಮಾರು 6", ರೆಕೆಯ ಅಳತೆ 3.25". ಗುಬ್ಬಚ್ಚಿಯ ದೇಹದ ಮೇಲ್ಭಾಗ ಕಂದು ಬೂದುಬಣ್ಣ. ಇದರ ಕೊಕ್ಕು ಕಪ್ಪು. ಕಾಲುಗಳು ಮಾಸಲು ಕಂದು ಬೂದು. ಭುಜಗಳು ಮತ್ತು ತಳ ಹೊದಿಕೆಗಳು ದಟ್ಟಕೆಂಗಂದು. ರೆಕ್ಕೆಗಳಿಗೆ ಎರಡು ಬಿಳಿಪಟ್ಟೆಗಳಿಂದ ಕೂಡಿದ ಕಂದು ಬಣ್ಣವಿದೆ. ಗಡ್ಡ ಮತ್ತು ಪುಕ್ಕದ ತಳಭಾಗದ ಹೊದಿಕೆಯ ಬಣ್ಣ ಬಿಳುಪು. ದೇಹದ ಉಳಿದ ತಳಭಾಗದ ಗರಿಗಳು ಬೂದು ಅಥವಾ ಕಂದು ಬಿಳುಪು. ಉದರ ಭಾಗ ಹಾಗು ತೆರಪು ಭಾಗಗಳು ಬಿಳುಪು. ಒಂದು ಪ್ರಕಾಶಮಾನವಾದ ಹಳದಿ ಚುಕ್ಕೆ ಕುತ್ತಿಗೆಯ ಮಧ್ಯೆ ಇರುವುದರಿಂದ ಇದನ್ನು ಹಳದಿ ಕುತ್ತಿಗೆ ಗುಬ್ಬಚ್ಚಿ ಎಂದು ಕರೆಯುತ್ತಾರೆ. ಹೆಣ್ಣು ಎಲ್ಲ ರೀತಿಯಲ್ಲೂ ಗಂಡನ್ನು ಹೋಲುತ್ತದೆ. ಆದರೆ ಅದರ ಕುತ್ತಿಗೆಯಲ್ಲಿರುವ ಚುಕ್ಕೆ ಮತ್ತು ಭುಜ ಭಾಗಗಳಲ್ಲಿರುವ ಬಣ್ಣ ಅಷ್ಟೊಂದು ಪ್ರಕಾಶ ಮಾನವಾಗಿರುವುದಿಲ್ಲ.

 ಹುಲ್ಲು ಮತ್ತು ಗರಿಗಳನ್ನು ಕೂಡಿಸಿ ಮರದ ಪೊಟರೆಯಲ್ಲಿ ಕಾಡುಗುಬ್ಬಚ್ಚಿ ತನ್ನ ಗೂಡನ್ನು ಕಟ್ಟುತದೆ. ಅದು ಮರಿ ಮಾಡುವ ಕಾಲ ಏಪ್ರಿಲ್ ನಿಂದ ಜುಲೈ ತಿಂಗಳ ವರೆಗೆ. ಹೆಣ್ಣು ಸುಮಾರು 3 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ಬಣ್ಣ, ಕುರುವಿನಾಕಾರದ ಚುಕ್ಕೆಗಳನ್ನೊಳಗೊಂಡ ದಟ್ಟ ಕಂದು ಮಿಶ್ರಿತ ತಿಳಿನೀಲಿ ಹಸಿರು. ಮೊಟ್ಟೆ ಮಂದವಾಗಿರುವ ಕಡೆ ದಟ್ಟವಾದ ಬಣ್ಣವಿದೆ. ಕೆಲವು ಮೊಟ್ಟೆಗಳಿಗೆ ಕೆಂಪು-ಕಂದು ಕಲೆಗಳಿಂದ ಮಾಡಿದ ಕೆನೆಬಣ್ಣವಿದೆ. ಗುಬ್ಬಚ್ಚಿಯ ಮೊಟ್ಟೆಗಳು ಸರಾಸರಿ ಅಳತೆ 0.7-0.54 ಅಂಗುಲ.

(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ